
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಬಿಪಿಎಲ್ ಕಾರ್ಡ್ (BPL Card) ಪರಿಷ್ಕರಣೆ ಪ್ರಕ್ರಿಯೆ ಇದೀಗ ಅತ್ಯಂತ ನಿರ್ಣಾಯಕ ಹಂತ ತಲುಪಿದೆ. ಲಕ್ಷಾಂತರ ಕುಟುಂಬಗಳ ಆಹಾರ ಭದ್ರತೆ, ಗ್ಯಾರಂಟಿ ಯೋಜನೆಗಳ ಲಾಭ ಹಾಗೂ ಬದುಕಿನ ಆಧಾರವಾಗಿರುವ ಬಿಪಿಎಲ್ ಕಾರ್ಡ್ ಉಳಿಯುತ್ತದೆಯೇ ಇಲ್ಲವೇ ಎಂಬುದು ಮುಂದಿನ ಎರಡು ದಿನಗಳಲ್ಲಿ ಸಲ್ಲಿಸುವ ಆಕ್ಷೇಪಣೆ ಮತ್ತು ದಾಖಲೆಗಳ ಮೇಲೆ ನಿರ್ಧಾರವಾಗಲಿದೆ. ಬಿಪಿಎಲ್ ಪಟ್ಟಿಯಿಂದ ಎಪಿಎಲ್‌ಗೆ (APL) ಶಿಫ್ಟ್ ಆಗಿರುವ ಸಾವಿರಾರು ಕಾರ್ಡ್‌ದಾರರು ತಮ್ಮ ಅರ್ಹತೆಯನ್ನು ಸಾಬೀತುಪಡಿಸಲು ನ್ಯಾಯಬೆಲೆ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ.
ಬಿಪಿಎಲ್ ಮಾನದಂಡಕ್ಕೆ ಅರ್ಹರಾಗಿದ್ದರೂ ಕಾರ್ಡ್ ಡಿಲೀಟ್ ಆಗಿದೆ ಎಂಬ ಆರೋಪಗಳು ರಾಜ್ಯದ ವಿವಿಧ ಭಾಗಗಳಿಂದ ಕೇಳಿಬಂದಿದ್ದವು. ನಾವು ಯಾವುದೇ ತೆರಿಗೆ ಪಾವತಿಸುವುದಿಲ್ಲ, ಜಮೀನು ಇಲ್ಲ, ಸ್ವಂತ ಮನೆ ಇಲ್ಲ. ಆದರೂ ನಮ್ಮ ಬಿಪಿಎಲ್ ಕಾರ್ಡ್ ರದ್ದಾಗಿದೆ ಎಂಬ ಆಕ್ರೋಶ ವ್ಯಾಪಕವಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತು, ಕಳೆದ ಅಕ್ಟೋಬರ್ 30ರಿಂದ 45 ದಿನಗಳ ಕಾಲಾವಕಾಶ ನೀಡಿ ಪರಿಷ್ಕರಣೆ ಪ್ರಕ್ರಿಯೆ ಆರಂಭಿಸಿತ್ತು.
ಗಡುವಿನ ಕೊನೆಯ ದಿನಗಳು ಹತ್ತಿರವಾಗುತ್ತಿದ್ದಂತೆ ರಾಜ್ಯಾದ್ಯಂತ ನ್ಯಾಯಬೆಲೆ ಅಂಗಡಿಗಳಲ್ಲಿ ಭಾರೀ ಜನಸಂದಣಿ ಕಂಡುಬರುತ್ತಿದೆ. ಈಗಾಗಲೇ ಏಳು ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣೆ ನಡೆಯುತ್ತಿದೆ. ಡಿಲೀಟ್ ಅಥವಾ ಎಪಿಎಲ್‌ಗೆ ಶಿಫ್ಟ್ ಆಗಿರುವ ಕಾರ್ಡ್‌ದಾರರು ತಮ್ಮ ಆದಾಯ, ಆಸ್ತಿ ಹಾಗೂ ಕುಟುಂಬ ಸ್ಥಿತಿಗೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸಲ್ಲಿಸಬೇಕಿದೆ. ಸಂಗ್ರಹಿಸಲಾದ ದಾಖಲೆಗಳನ್ನು ಆಹಾರ ಇಲಾಖೆ ಪರಿಶೀಲನೆಗೆ ಕಳುಹಿಸಲಾಗುತ್ತದೆ. ದಾಖಲೆಗಳು ಸರಿಯಾಗಿದ್ದರೆ ಮಾತ್ರ ಬಿಪಿಎಲ್ ಕಾರ್ಡ್ ಮರುಸ್ಥಾಪನೆ ಆಗಲಿದೆ.
ಬಿಪಿಎಲ್ ಪರಿಷ್ಕರಣೆಗೆ ಕಾರಣವೇನು?
ರಾಜ್ಯದಲ್ಲಿ ಬಡವರಿಗಿಂತಲೂ ಬಡತನ ರೇಖೆಗಿಂತ ಮೇಲಿರುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ಬಿಪಿಎಲ್ ಕಾರ್ಡ್‌ಗಳು ವಿತರಣೆ ಆಗಿರುವುದು ಸರ್ಕಾರದ ಗಮನಕ್ಕೆ ಬಂದಿತ್ತು. ವಿಶೇಷವಾಗಿ ಬಡತನ ಪ್ರಮಾಣ ಕಡಿಮೆ ಇರುವ ಕೆಲ ಜಿಲ್ಲೆಗಳಲ್ಲಿ ಬಡವರ ಸಂಖ್ಯೆಗೆ ಹೋಲಿಸಿದರೆ ಹತ್ತಾರು ಪಟ್ಟು ಹೆಚ್ಚು ಬಿಪಿಎಲ್ ಕಾರ್ಡ್‌ಗಳು ಇದ್ದವು. ಕೆಲ ಜಿಲ್ಲೆಗಳಲ್ಲಿ ಬಡತನ ಪ್ರಮಾಣ ಶೇ.1 ರಿಂದ 5ರಷ್ಟಿದ್ದರೂ, ಶೇ.80ಕ್ಕಿಂತ ಹೆಚ್ಚು ಬಿಪಿಎಲ್ ಕಾರ್ಡ್ ಹಂಚಿಕೆ ಆಗಿರುವುದು ಸರ್ಕಾರಕ್ಕೆ ಆರ್ಥಿಕ ಹೊರೆ ತಂದಿತ್ತು.
ಗ್ಯಾರಂಟಿ ಯೋಜನೆಗಳ ಜಾರಿಗೆ ಒತ್ತಡದಲ್ಲಿದ್ದ ಸರ್ಕಾರ, ಅನರ್ಹರಿಗೆ ಹೋಗುತ್ತಿರುವ ಬಿಪಿಎಲ್ ಕಾರ್ಡ್‌ಗಳನ್ನು ಪತ್ತೆಹಚ್ಚಿ ರದ್ದುಪಡಿಸುವ ಮೂಲಕ ವೆಚ್ಚ ಕಡಿತಕ್ಕೆ ಮುಂದಾಯಿತು. ಪಂಚಾಯಿತಿ ಮಟ್ಟದಿಂದಲೇ ಪರಿಶೀಲನೆ ನಡೆಸಿ ಅನರ್ಹ ಕಾರ್ಡ್‌ಗಳ ಪತ್ತೆಗೆ ಆಹಾರ ಇಲಾಖೆ ಅಭಿಯಾನ ಆರಂಭಿಸಿತು.
ಯಾರ ಕಾರ್ಡ್ ರದ್ದಾಗಲಿದೆ?
ಆಹಾರ ಇಲಾಖೆ ನಿಗದಿ ಮಾಡಿರುವ ಮಾನದಂಡಗಳ ಪ್ರಕಾರ
- ಕುಟುಂಬದ ವಾರ್ಷಿಕ ಆದಾಯ ₹1.20 ಲಕ್ಷ ಮೀರಿದ್ದರೆ
- ಆದಾಯ ತೆರಿಗೆ ಪಾವತಿಸಿದವರಾಗಿದ್ದರೆ
- ನಿಗದಿತ ಮಿತಿಗಿಂತ ಹೆಚ್ಚು ಜಮೀನು ಹೊಂದಿದ್ದರೆ
- ನಗರ ಪ್ರದೇಶದಲ್ಲಿ 1000 ಚದರ ಅಡಿಗಿಂತ ಹೆಚ್ಚಿನ ಪಕ್ಕಾ ಮನೆ ಇದ್ದರೆ
ವೈಟ್ ಬೋರ್ಡ್ ಹೊಂದಿರುವ ನಾಲ್ಕು ಚಕ್ರದ ವಾಹನ ಇದ್ದು ಬಿಪಿಎಲ್ ಕಾರ್ಡ್ ಪಡೆದಿದ್ದರೆ ಅಂತಹವರ ಬಿಪಿಎಲ್ ಕಾರ್ಡ್‌ಗಳು ರದ್ದಾಗಲಿವೆ.
₹25,000 ಕೋಟಿ ಉಳಿತಾಯದ ಲೆಕ್ಕ:
ಈ ಕಟ್ಟುನಿಟ್ಟಿನ ಪರಿಷ್ಕರಣೆ ಮೂಲಕ ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿ ಸುಮಾರು ₹25,000 ಕೋಟಿ ರೂಪಾಯಿ ಉಳಿತಾಯ ಮಾಡಲು ಸರ್ಕಾರ ಯೋಜನೆ ರೂಪಿಸಿದೆ. ಆದರೆ ನಿಜಕ್ಕೂ ಅರ್ಹರಾದ ಬಡ ಕುಟುಂಬಗಳಿಗೆ ಅನ್ಯಾಯವಾಗಬಾರದು ಎಂಬ ಕಾರಣಕ್ಕೆ ಆಕ್ಷೇಪಣೆ ಸಲ್ಲಿಸಲು ಕೊನೆಯ ಅವಕಾಶ ನೀಡಲಾಗಿದೆ.
ಇನ್ನು ಎರಡು ದಿನಗಳಲ್ಲಿ ಗಡುವು ಮುಕ್ತಾಯವಾಗಲಿದ್ದು, ಬಿಪಿಎಲ್ ಕಾರ್ಡ್ ಉಳಿಸಿಕೊಳ್ಳಲು ಅರ್ಹರು ತಕ್ಷಣವೇ ಸೂಕ್ತ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸುವಂತೆ ಆಹಾರ ಇಲಾಖೆ ಮನವಿ ಮಾಡಿದೆ.
